ಶನಿವಾರ, ಮೇ 1, 2010

ಹೊಸತು ವರ್ಸೆಸ್ ಹಳತು

ಹೊಸತು ಬೇಕೆಂದು ಮನಸ್ಸು ಬಯಸಿದಾಗ ನಮ್ಮೊಳಗೆ ಹುಟ್ಟುವ ಹೊಸತರೆಡೆಗಿನ ಆಕರ್ಷಣೆ, ಹಳತು ಇದುವರೆಗೂ ನೀಡಿದ್ದೆಲ್ಲವನ್ನು ಕೊಚ್ಚಿ ಹಾಕಿ ಹೊಸತಿನದರ ಬಗೆಗೆ ಏಕ ಪಕ್ಷಿಯವಾಗಿ ಆಲೋಚಿಸುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಹೊಸತರ ಅಬ್ಬರ , ನಿರೀಕ್ಷೆ , ಕಲ್ಪನೆಗಳೆಲ್ಲವೂ ಹಳೆಯದ್ದನ್ನು ಇನ್ನಿಲ್ಲದಂತೆ ಉಪೇಕ್ಷಿಸಲು ಕಾರಣವಾಗುತ್ತವೆ.ಆದರೆ ಒಂದು ದಿನ ಹೊಸತರ ಬಗೆಗಿನ ನಿರೀಕ್ಷೆಗಳೆಲ್ಲವೂ ಸುಳ್ಳಾಗಲು ಪ್ರಾರಂಭ ವಾಗುತ್ತದೆ. ಆಗ ಮನುಷ್ಯ ಪುನಃ ಹಳೆಯದರೆಡೆಗೆ ದೃಷ್ಟಿ ಹಾಯಿಸುತ್ತಾನೆ . ಈಗ ಅವನಿಗೆ ಅಲ್ಲಿ ಇದುವರೆಗೆ ಗುರುತಿಸದಿದ್ದ ವಿಶೇಷಗಳು ಕಾಣಸಿಗುತ್ತದೆ.ಮನುಷ್ಯ ಪುನಃ ಆ ಹಳೆಯದರಲ್ಲಿಯೇ ನೆಮ್ಮದಿ ಕಾಣಲು ಪ್ರಾರಂಬಿಸುತ್ತಾನೆ.ಹೀಗೇ ನನ್ನೊಳಗೆ ನಡೆದಿದ್ದ ಹಳತು ವರ್ಸಸ್ ಹೊಸತರ ಘರ್ಷಣೆ , ಹೊಸತರ ಪ್ರಾರಂಭಿಕ ಗೆಲುವು , ಅದನ್ನು ಮೆಟ್ಟಿ ನಿಂತು ನನ್ನ ಮನ ಗೆದ್ದ ಹಳತರ ವಿಶೇಷತೆ ಇವೆಲ್ಲದರ ಚಿತ್ರಣ ಇಲ್ಲಿದೆ .ಓದುವ ಸುಖ ನಿಮ್ಮದಾಗಿರಲಿ .


"ಒಂದು ಸೀಡಿ ಹಾಕಿದ್ರೆ ಮೂರು ಘಂಟೆಗಳ ಕಾಲ ಸತತವಾಗಿ ಹಾಡ್ತಾ ಇರುತ್ತೆ, ಅರ್ದ ಘಂಟೆಗೊಂದ್ಸಲ ಕ್ಯಾಸೆಟ್ ಬದಲಾಯಿಸುವ ತಾಪತ್ರಯ ಇಲ್ಲ , ರೀಲ್ ಸುತ್ತಿ ಡಿಸ್ಟರ್ಬ್ ಆಗೋ ಸಂದರ್ಭ ಅಂತು ಬರೋದೇ ಇಲ್ಲ" ಅಂತ ನನ್ನ ಗೆಳೆಯ ಎಂಪಿತ್ರೀಯ ಬಗ್ಗೆ ಹೊಗಳುತ್ತಾ ಇರಬೇಕಾದರೇನೆ ನಾನು ಎಂಪಿತ್ರೀಯನ್ನು ಕೊಳ್ಳಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡೆ.ಇಷ್ಟಕ್ಕೆ ನಿಲ್ಲಿಸದೆ, ಗೆಳೆಯ "ಒಂದೊಂದು ಸಿನಿಮಾದ ಕ್ಯಾಸೆಟ್ಟಿಗೆ ನಲುವತ್ತು ರುಪಾಯಿ ಕೊಡುವುದಕ್ಕಿಂತ ಕೇವಲ ಮೂವತ್ತು ರೂಪಾಯಿ ಕೊಟ್ಟು ಮೂವತ್ತು ಸಿನಿಮಾದ ಹಾಡುಗಳಿರುವ ಒಂದು ಸೀಡಿ ಖರಿದಿಸಿದ್ರೆ ಮೂಗೀತು " ಅಂತ ಹೇಳಿದ ಮೇಲಂತೂ ಎಂಪಿತ್ರೀ ಬೇಕೆಂಬ ಬಯಕೆಯ ಬೇರು ನನ್ನಲ್ಲಿ ಮತ್ತಷ್ಟು ಆಳಕ್ಕಿಳಿಯಿತು.
ಇನ್ನು ಹೆಚ್ಚೆಂದರೆ ಕೇವಲ ಒಂದು ವಾರ ಮಾತ್ರ ಈ ತಾಪತ್ರಯ ಅಂತ ಮನಸಲ್ಲೇ ಅಂದುಕೊಳ್ಳುತ್ತ ಟೇಪ್ ರೆಕಾರ್ಡರ್ನಲ್ಲಿ ಹಾಡು ಕೇಳಿಸಿ ಕೊಳ್ಳುತ್ತಿದ್ದೆ.ಹಾಡಿನ ನಡುವೆ , ಪಕ್ಕನೆ ರೀಲ್ ಸುತ್ತಿಕೊಂದಾಗ ಟೇಪ್ ಕಡೆಗಿನ ತಿರಸ್ಕಾರ ಮತ್ತೂ ಹೆಚ್ಹಾಗುತಿತ್ತು .ಇದ್ಯಾವುದರ ಬಗೆಗೆ ಗಮನವಿಲ್ಲದೆ , ಇನ್ನು ಕೆಲವೇ ದಿನಗಳಲ್ಲಿ ನಾನು ಯಾರಿಗೂ ಬೇಡ ವಾಗುತ್ತೇನೆ ಅನ್ನುವುದರ ಅರಿವು ಇಲ್ಲದ ಟೇಪ್ ತನ್ನ ಕರ್ತವ್ಯವನ್ನು ಆದಸ್ಟು ಚೆನ್ನಾಗಿ ನಿಭಾಯಿಸುತಿತ್ತು . ನನ್ನ ಮನಸ್ಸು ಹೊಸದಾಗಿ ಬರಲಿರುವ ಎಂಪಿತ್ರೀಯ ಕಡೆಗೆ ಇದ್ದುದರಿಂದಲೋ ಏನೋ , ಟೇಪ್ ನಲ್ಲಿ ಮೂಡುತ್ತಿದ್ದ ದ್ವನಿಗಳು ಯಾವುದೂ ನನಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ .


ಒಂದರ ಹಿಂದೊಂದರಂತೆ ಏಳು ದಿನಗಳು ಕಳೆದವು.ನನ್ನ ಮನೆಯಲ್ಲಿ ಎಂಪಿತ್ರೀಯ ಬಾಯೀಂದ ಹಾಡುಗಳು ಬರಲಾರಂಭಿಸಿದವು .ಟೇಪ್ ಎಸ್ಟೋ ವರ್ಷಗಳಿಂದ ಹಾಡಿ ಹಾಡಿ ಸುಸ್ತಾಗಿ , ಮೌನದೊಳಗೆ ಜಾರಿದಂತೆ ಕಾಣಿಸಿತು .ಹೊಸತರ ಆಗಮನವಾದಾಗ ನಡೆಯಬೇಕಾಗಿದ್ದ ಎಲ್ಲಾ ಸಂಬ್ರ್ಹಮಗಳು ಮನೆಯಲ್ಲಿ ನಡೆದವು .ಬಂದಂದಿನಿಂದ , ಯಾವುದೋ ವಿಶೇಷ ವ್ಯಕ್ತಿಗೆ ಸನ್ಮಾನಿಸಿ ಶಾಲುಹೊದಿಸಿದಂತೆ, ತನ್ನ ಮೇಲೆ ಹಳದಿ ಶಾಲನ್ನು ಹೊತ್ತು ಎಂಪಿತ್ರೀ ಮನೆಯ ಹಾಲಿನಲ್ಲಿ ಕುಳಿತಿತ್ತು .


ದಿನಗಳು ನಿಲ್ಲಲಿಲ್ಲ ಹಾಗೇ ಹೊಸತು ಎಂಬ ಎಂಪಿತ್ರೀಯ ಪಟ್ಟವೂ ,ನನಗೆ ಎಂಪಿತ್ರೀಯೂ ಹಳೆಯದಾಯಿತು.ತಾನು ತೊಟ್ಟಿದ್ದ ಹಳದಿಶಾಲು, ಬಿಳಿ ಲಕೋಟೆಗಳಿಲ್ಲದೆ ಎಂಪಿತ್ರೀಯು , ತಾನು ಹಳಬ ಅನ್ನುವುದನ್ನು ಒಪ್ಪಿಕೊಂಡಂತೆ ನನಗೆ ಅನ್ನಿಸಿತು .ಸೀಡಿ ಹಾಕಿದರೆ ಒಂದರ ಹಿಂದೊಂದರಂತೆ, ಸತತವಾಗಿ ಮೂರು ಘಂಟೆಗಳ ಕಾಲ ಹಾಡು ಕೇಳಬೇಕೆಂಬ ನನ್ನ ಉತ್ಸಾಹ , ತಾಳ್ಮೆಗಳೆರಡೂ ಮಂಜುಗಡ್ಡೆ ಕರಗಿದಂತೆ ಕರಗಿದವು . ನೂರ ಇಪ್ಪತ್ತು ಹಾಡುಗಳಿರುವ ಸೀಡಿಯಿಂದ ಒಂದೇ ಒಂದು ಹಾಡು ಕೇಳಲು ನನ್ನ ಕೈಲಿರುವ ರಿಮೋಟ್ ಕಂಟ್ರೋಲ್ ಬಿಡುತ್ತಿರಲಿಲ್ಲ . ಹಾಡು ಕೇಳುವುದೆಂದರೆ ರಿಮೋಟ್ ಅನ್ನು ಕೈಯಲ್ಲಿ ಹಿಡಿದು ಫಾರ್ವೊರ್ದ್ ಮಾಡುತ್ತಾ ಇರುವುದು ಅನ್ನುವ ಹಂತಕ್ಕೆ ನಾನು ತಲುಪಿದ್ದೆ.ಹೀಗೆ ಸಮಯ ಸಿಕ್ಕಾಗೆಲ್ಲ ಕೈಯಲ್ಲಿ ರಿಮೋಟ್ ಹಿಡಿದು ಹಾಡು ಕೇಳುವ ಶಾಸ್ತ್ರವನ್ನು ಮಾಡುತ್ತಾ ಇದ್ದೆ .


ಸ್ವಲ್ಪ ದಿನಗಳ ನಂತರ , ತನಗೆ ಮೊದಲಿನಸ್ತು ಪ್ರಾಮುಖ್ಯತೆಯನ್ನು ಯಜಮಾನ ನೀಡುತ್ತಿಲ್ಲ ಅನ್ನುವ ಕೋಪದಿಂದಲೋ ಏನೋ ಎಂಪಿತ್ರೀ ಹಾಡುವುದನ್ನು ನಿಲ್ಲಿಸಿತು.ಎಂಪಿತ್ರೀಯ ಬಗೆಗಿದ್ದ ಉತ್ಸಾಹ ಕರಗಿದ್ದರಿಂದ ಮತ್ತು ಮೈಯೊಳಗೆ ಸೇರಿಕೊಂಡಿದ್ದ ಆಲಸ್ಯದಿಂದಾಗಿ ಅದನ್ನು ರೆಪೇರಿ ಮಾಡಿಸುವ ಗೋಜಿಗೆ ನಾನು ಹೋಗಲಿಲ್ಲ.ಹಾಗಾಗಿ ಬೇರೆ ನಿರ್ವಾಹವಿಲ್ಲದೆ ದೃಷ್ಟಿ ಹಳೆಯ ಟೇಪ್ ರೆಕಾರ್ಡರ್ ಕಡೆಗೆ ಹೋಯಿತು. ಧೂಳು, ಜೇಡನಬಲೆಗಳನ್ನು ತನ್ನ ಮೇಲೆ ಹೊತ್ತುಕೊಂಡಿದ್ದರೂ ,ಟೇಪ್ ರೆಕಾರ್ಡರ್ನಲ್ಲಿ ನಿನ್ನ ಬಯಕೆಯನ್ನು ತನಿಸಬಲ್ಲೆ ಎಂಬ ವಿಶ್ವಾಸ ನನಗೆ ಕಾಣಿಸಿತು.ನಾನು ಪುನಃ ಟೇಪ್ ನ ಬಳಿ ಹೋಗಿ ಹಿಂದಿನಂತೆ ನನಗಾಗಿ ಹಾಡುವಂತೆ ಕೇಳಿಕೊಂಡೆ .


ಅಂದು ನನ್ನ ಬಯಕೆಯನ್ನು ಅರಿತು ಹಾಡಿದ ಟೇಪ್ ಇಂದಿಗೂ ನನಗೆ ಹಾಡ ಕೇಳಿಸಿ ರಂಜಿಸುತಿದೆ . ಈಗ ನಾನು ಬದಲಾಗಿದ್ದೇನೆ . ಆರು ಹಾಡುಗಳಿರುವ ಕ್ಯಾಸೆಟ್ ಹಾಕಿದರೆ, ನಮ್ಮ ತಾಳ್ಮೆಗೆ ಯಾವುದೇ ಭಂಗ ತರದೆ ಆತ್ಮೀಯವಾದ ದನಿಯಲ್ಲಿ ಹಾಡು ಕೇಳಿಸುವ ಟೇಪ್ ರೆಕಾರ್ಡರ್, ನೂರ ಇಪ್ಪತ್ತರಸ್ಟು ಹಾಡುಗಳಿದ್ದರೂ ನೆಮ್ಮದಿಯಾಗಿ, ತಾಳ್ಮೆಯಿಂದ ಒಂದು ಹಾಡು ಕೇಳಲು ಅವಕಾಶ ನೀಡದ ಎಂಪಿತ್ರೀಗಿಂತ ಎಸ್ಟೋ ಉತ್ತಮ ಅನ್ನುವುದನ್ನು ಅರಿತುಕೊಂಡಿದ್ದೇನೆ .ಈಗ ಹಾಡು ಕೇಳುವಾಗ ಟೇಪ್ನಲ್ಲಿ ರೀಲ್ ಸುತ್ತಿಕೊಂಡರೆ ಮೊದಲಿನಂತೆ ನನಗೆ ಕೋಪ ಬರುವುದಿಲ್ಲ.


1 ಕಾಮೆಂಟ್‌:

KP ಹೇಳಿದರು...

wah...!!!! bombat mere dost...keep writing :) mein toh mp3 se cd man tak... cd man sewalkman tak, walk man se i pod tak aaya... ek gaana bhi theek se sun nahi paaya hoon...

anyways superb thought ...best of all :)

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ